ಚಕ್ಕೋತ ಸೊಪ್ಪು

ಕೀನೋಪೋಡಿಯೇಸೀ ಕುಟುಂಬಕ್ಕೆ ಸೇರಿದ ಒಂದು ಏಕವಾರ್ಷಿಕ ಮೂಲಿಕೆಸಸ್ಯ. ಆಟ್ರಿಪ್ಲೆಕ್ಸ್ ಹಾರ್ಟೆನ್ಸಿಸ್ ಇದರ ಶಾಸ್ತ್ರೀಯ ಹೆಸರು. ಇದರ ಎಲೆ ಮತ್ತು ಎಳೆಯ ಕಾಂಡವನ್ನು ತರಕಾರಿಯಾಗಿ ಉಪಯೋಗಿಸುತ್ತಾರೆ. ಪ್ರಪಂಚದ ಉಪೋಷ್ಣ ಹಾಗೂ ಸಮಶಿತೋಷ್ಣವಲಯಗಳಲ್ಲೆಲ್ಲ ಇದರ ವ್ಯಾಪ್ತಿ ಉಂಟು. ಭಾರತದಲ್ಲಿ ಬಂಗಾಳ ಮತ್ತು ದಕ್ಷಿಣದ ರಾಜ್ಯಗಳಲ್ಲಿ ಇದನ್ನು ಬೆಳೆಸಲಾಗುತ್ತದೆ. ದಪ್ಪ ಹಾಗೂ ಮೆತು ತಿರುಳಿನ ಕಾಂಡ ಮತ್ತು ಎಲೆಗಳುಳ್ಳ ಪುಟ್ಟ ಗಿಡ ಇದು. ಎಲೆಗಳು ಹೃದಯ ಇಲ್ಲವೆ ತ್ರಿಕೋನಾಕಾರದವು. ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿವೆ. ಉದ್ದ 10-23 ಸೆಂ.ಮೀ. ಅಂಚು ನಯವಾಗಿರಬಹುದು ಇಲ್ಲವೆ ದಂತಿತವಾಗಿರಬಹುದು. ಹೂಗಳು ಚಿಕ್ಕಗಾತ್ರದವು; ಅಂತ್ಯಾರಂಭಿ ಮಾದರಿಯ ಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಚಕ್ಕೋತಸೊಪ್ಪನ್ನು ಯಾವ ಬಗೆಯ ಮಣ್ಣಿನಲ್ಲಾದರೂ ಬೆಳೆಯಬಹುದು. ಬಿತ್ತನೆ ಕಾಲ ಮಾರ್ಚ್ ತಿಂಗಳು. ಒಂದು ಎಕರೆಗೆ 2-2 1/2 ಕಿ.ಗ್ರಾಂ.. ಬೀಜ ಬೇಕಾಗುತ್ತದೆ. ಇದರ ಬೀಜ ಹಾಗೂ ಎಲೆಗಳಲ್ಲಿ ವಿಟಮಿನ್ ಎ ಅಧಿಕ ಮೊತ್ತದಲ್ಲಿದೆ.
(ಬಿ.ಎ.ಸಿ.; ಎಸ್.ಐ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ